600 ರೂಪಾಯಿ ವಿಚಾರಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ಬಳಿ ನಡೆದಿದೆ. ಮಂಜು ಅಲಿಯಾಸ್ ಕೋಳಿ ಮಂಜು ಮೃತ ವ್ಯಕ್ತಿಯಾಗಿದ್ದು, ಆರೋಪಿ ಪಳನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಜು ಮತ್ತು ಪಳನಿ ನಡುವೆ ನಿನ್ನೆ ರಾತ್ರಿ ಬಾರ್ ಬಳಿ ಆರಂಭವಾದ ಗಲಾಟೆ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಸಿ.ಕೆ.ಅಚ್ಚಕಟ್ಟು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ದ ಮಂಜು ಬಳಿ ಆರೋಪಿ ಪಳನಿ, ತನ್ನ ಮೊಬೈಲನ್ನ ಅಡಮಾನ ಇಟ್ಟಿದ್ದ. ಮದ್ಯಸೇವಿಸಲು ಹಣ ಬೇಕಿದ್ದ ಕಾರಣಕ್ಕೆ ಮೊಬೈಲ್ ಅಡವಿಟ್ಟು ದುಡ್ಡು ಪಡೆದಿದ್ದ. ನಿನ್ನೆ ತಡರಾತ್ರಿ ಮೊಬೈಲ್ ವಾಪಾಸ್ಸು ನೀಡುವಂತೆ ಮಂಜುಗೆ ಪಳನಿ ಧಮ್ಕಿ ಹಾಕಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಮಂಜನ ಮೇಲೆ ಅಟ್ಯಾಕ್ ಮಾಡಿದ್ದ. ದೊಣ್ಣೆಯಿಂದ ತಲೆಯ ಭಾಗಕ್ಕೆ ಪಳನಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಂಜು ಪ್ರಾಣಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.



























