ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8, 9 ಮತ್ತು 10ನೇ ತರಗತಿ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಸೆ.17ರ ಶುಕ್ರವಾರದಿಂದ ಈ ಮೂರು ತರಗತಿಗಳು ಆರಂಭವಾಗಲಿದೆ. 6 ಮತ್ತು 7ನೇ ತರಗತಿಗಳು ಸೆ.20ರ ಸೋಮವಾರದಿಂದ ಆರಂಭವಾಗಲಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಕಳುಹಿಸಲು ಒಪ್ಪದ ಪೋಷಕರ ಮಕ್ಕಳಿಗೆ ಆನ್ಲೈನ್ ತರಗತಿ ಇರುತ್ತದೆ. 9 ಮತ್ತು 10ನೇ ತರಗತಿಯವರಿಗೆ ಬೆಳಿಗ್ಗೆ ಹಾಗೂ 8ನೇ ತರಗತಿಯವರಿಗೆ ಮಧ್ಯಾಹ್ನದ ಬಳಿಕ ತರಗತಿ ನಡೆಯುತ್ತದೆ. ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಕರೆದು ಸಭೆ ನಡೆಸಿ ಹೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಡಿಗ್ರಿ ತರಗತಿಗಳನ್ನು ವಿಜ್ಞಾನ ವಿಭಾಗ ಮಾತ್ರ ಭೌತಿಕ ತರಗತಿ ನಡೆಸಲು ಹೇಳಿದ್ದೇವೆ. ಆದರೆ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಮನವಿ ಬರುತ್ತಿದೆ. ಹೀಗಾಗಿ ಮತ್ತೆ ವಿವಿ ಆಡಳಿತದ ಜೊತೆ ಮಾತುಕತೆ ನಡೆಸಿ ಅಂತಿಮ ಪದವಿ ಆರಂಭಿಸಲು ಚಿಂತನೆ ನಡೆಸುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.