ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುನಿಂದ ಅಗ್ರಾರ್ ಸಾಗುವ ದಾರಿಯ ಒಳರಸ್ತೆಯ ಮಧ್ಯೆ ನವಿಲೊಂದರ ಮೃತದೇಹ ಪತ್ತೆಯಾಗಿದ್ದು, ವಿದ್ಯುತ್ ಶಾಕ್ ಹೊಡೆದು ನವಿಲು ಮೃತಪಟ್ಟಿರುವುದಾಗಿ ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಸತ್ತಿರುವ ನವಿಲು ಪತ್ತೆಯಾಗಿರುವ ಕುರಿತು ಅರಣ್ಯ ಇಲಾಖೆಗೆ ಬಂದ ಮಾಹಿತಿಯಂತೆ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕಿ ಸ್ಮಿತಾ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ನವಿಲಿನ ಮೃತದೇಹವನ್ನು ಇಲಾಖೆ ನಿಯಮಾವಳಿಯಂತೆ ದಹನ ಕಾರ್ಯ ನಡೆಸಲಾಗಿದೆ. ನವೀಲಿನ ಮೃತದೇಹ ಪತ್ತೆಯಾಗಿರುವ ರಸ್ತೆಯ ಮೇಲ್ಭಾಗದಲ್ಲೇ ವಿದ್ಯುತ್ ಲೈನ್ ಹಾದು ಹೋಗಿದ್ದು, ಹೀಗಾಗಿ ವಿದ್ಯುತ್ ಶಾಕ್‌ನಿಂದ ಸತ್ತಿರುವುದು ಖಚಿತಗೊಂಡಿದೆ.
ಜೊತೆಗೆ ಮೃತದೇಹ ಕೊಳೆತ್ತಿರುವ ಕಾರಣದಿಂದ ಮರಣೋತ್ತರ ಪರೀಕ್ಷೆ ನಡೆಸುವುದು ಸಾಧ್ಯವಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.