ವಿಟ್ಲ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ 25ಲಕ್ಷ ರೂಪಾಯಿ ಅನುದಾನದಲ್ಲಿ ವಿಟ್ಲ ಪ.ಪಂವ್ಯಾಪ್ತಿಯ 11ನೇ ವಾರ್ಡಿನಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯೆಂದು ಆರೋಪಿಸಿ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಆರ್.ಟಿ.ಐ. ಕಾರ್ಯಕರ್ತರೊಬ್ಬರು ಜಿಲ್ಲಾಧಿಕಾರಿಗೆ ಮತ್ತು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಅನಂತೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಾದು ಹೋಗುವ ಸಮುದಾಯ ಆಸ್ಪತ್ರೆ ರಸ್ತೆ ಬದಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಯಾಗಿರುವ 25 ಲಕ್ಷ ರೂ. ಕಾಮಗಾರಿಯನ್ನು ಉಡುಪಿ ಮೂಲದ ಗುತ್ತಿಗೆದಾರರೊಬ್ಬರು ವಹಿಸಿಕೊಂಡಿದ್ದಾರೆ. ಚರಂಡಿ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ಮಿಶ್ರಣದಲ್ಲಿ ಸಿಮೆಂಟ್ ಪ್ರಮಾಣಕ್ಕೆ ಸರಿಯಾಗಿ ಬಳಸದೇ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಾ ಕಾಟಾಚಾರದ ಕೆಲಸ ಮಾಡಿದ್ದಾರೆಂದು ಸ್ಥಳೀಯರ ಆರೋಪಿಸಿದ್ದಾರೆ.
ಗುತ್ತಿಗೆದಾರರ ಕಾರ್ಮಿಕರು ಉತ್ತರ ಭಾರತದವರಾಗಿದ್ದು, ಕಾಟಾಚಾರದ ಕೆಲಸ ಮಾಡುತ್ತಿದ್ದರೂ ಇಂಜಿನಿಯರಾಗಲೀ, ಗುತ್ತಿಗೆದಾರನಾಗಲೀ ಸ್ಥಳಕ್ಕೆ ಬಾರದೇ ತರಾತುರಿಯಲ್ಲಿ ಕೆಲಸ ಮುಗಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಪ.ಪಂ.ಮುಖ್ಯಾಧಿಕಾರಿಯಲ್ಲಿ ವಿಚಾರಿಸಿದಾಗ ಕಾಮಗಾರಿಯು ನಮ್ಮ ಉಸ್ತುವಾರಿಯಲ್ಲಿ ನಡೆಯುತ್ತಿಲ್ಲ. ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಹಾಗೂ ಕಾಟಾಚಾರದ ಕಾಮಗಾರಿ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆರ್.ಟಿ.ಐ.ಕಾರ್ಯಕರ್ತ ಗಣೇಶ್ ಎಂಬವರು ಜಿಲ್ಲಾಧಿಕಾರಿಗೆ ಮತ್ತು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.