ವಿಟ್ಲ: ಅಳಿಕೆ- ಸಂಸ್ಕಾರ ಭಾರತೀ ದ.ಕ.ಜಿಲ್ಲೆ,ಬಂಟ್ವಾಳತಾಲೂಕು ಹಾಗೂ ಶ್ರೀ ಸ್ಕಂದ ಬಾಲಕಲಾ ವೃಂದ ಇದರ ಸಂಯುಕ್ತಾಶ್ರಯದಲ್ಲಿ
ನವಚೇತನ ಯುವತಿಮಂಡಲ (ರಿ.),ಅಳಿಕೆ ಯುವಕಮಂಡಲ (ರಿ.) ಯಕ್ಷಪೋಷಕರು ಅಳಿಕೆ ಇವರ ಸಹಯೋಗದೊಂದಿಗೆ ಅಳಿಕೆ ಯುವಕಮಂಡಲ ಚೆಂಡುಕಳ ಇದರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ 3 ದಿನದ ಸಂಸ್ಕಾರ ಸೌರಭ ಮಕ್ಕಳ ರಜಾಹಬ್ಬದ ಸಮಾರೋಪ ಸಮಾರಂಭ ಸಂಸ್ಕಾರಭಾರತೀ ದ.ಕ.ಜಿಲ್ಲಾಧ್ಯಕ್ಷ ರಾದ ಟಿ.ತಾರಾನಾಥ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಮಾತೃಪೂಜನದೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಸಂಸ್ಕಾರ ಪಥವನ್ನು ಹಿರಿಯರು ನಮಗೆ ಹಾಕಿ ಕೊಟ್ಟಿದ್ದಾರೆ,ತಾಯಿಯನ್ನುಆರಾಧಿಸುವ ಸಂಸ್ಕೃತಿಯವರು ನಾವು ಒಂಬತ್ತು ತಿಂಗಳು ಹೊತ್ತು, ಹೆತ್ತು, ಮುತ್ತಿಟ್ಟು ತುತ್ತು ತಿನಿಸಿ ವಾತ್ಸಲ್ಯಮಯಿ ತಾಯಿಯ ಋಣ ತೀರಿಸುವುದು ಮನುಷ್ಯನ ಬದುಕಿಗೆ ಸಾರ್ಥಕ್ಯವನ್ನು ನೀಡುತ್ತದೆ ಅಂತಹ ನಿತ್ಯನಡೆಯಬೇಕಾದ ಕಾರ್ಯಕ್ರಮ ಇಂದು ಸಾಂಕೇತಿಕವಾಗಿ ಮಕ್ಕಳು ಮಾತೇ ಯರನ್ನು ಪೂಜಿಸಿ ಧನ್ಯರಾದರು.ಇಂತಹ ಸಂಸ್ಕಾರಯುತ ಕಾರ್ಯಕ್ರಮದಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ಹಿರಿಯರ ಪ್ರೇರಣೆಯಿರಲಿ ಶಿಬಿರಾರ್ಥಿಗಳಿಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗಲಿ ಎಂದರು.

ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡಿದ ಟಿ.ತಾರಾನಾಥ ಕೊಟ್ಟಾರಿಯವರು, ಸಂಸ್ಕಾರ ಸೌರಭ ಹಬ್ಬಿಕೊಳ್ಳಬೇಕಾದ ಬೇರು,ನಮ್ಮ ಸಂಸ್ಕೃತಿಯ ನೆಲೆಗಟ್ಟನ್ನು ಮಕ್ಕಳ ಮುಖೇನ ಉಳಿಸಿ ಬೆಳೆಸ ಬೇಕು ಈ ನಿಟ್ಟಿನಲ್ಲಿ ಸಂಸ್ಕಾರ ಭಾರತೀ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಭಗವದ್ಗೀತೆಯ ಕಲಿಕೆಗೆ ಮಕ್ಕಳಿಗೆ ಅನವು ಮಾಡಲಾಗುವುದು ಶಿಬಿರ ಸಂಘಟಕರ, ನಿರ್ವಾಕರ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು.

ಸಭೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರಶಸ್ತಿ ವಿಜೇತ ರಾಜೇಶ್ ಆರ್.ಕೆ.ಆರ್ಟ್ಸ್ ಶುಭಹಾರೈಸಿದರು, ವೇದಿಕೆಯಲ್ಲಿ ಎ.ಪಿ.ಎಂ.ಸಿ. ಸದಸ್ಯೆ ಗೀತಾಲತ ಟಿ.ಶೆಟ್ಟಿ ಅಳಿಕೆ, ವಿಶ್ವಹಿಂದುಪರಿಷದ್ ಬಜರಂಗದಳ ಅಳಿಕೆ ವಲಯದ ಗೌರವಾಧ್ಯಕ್ಷ ಅಣ್ಣುಕುಲಾಲ್ ಚೆಂಡುಕಳ,ನವಚೇತನ ಯುವತಿಮಂಡಲದ ಅಧ್ಯಕ್ಷೆ ಅಮೀತಾ ಸಂಜೀವ ಉಪಸ್ಥಿತರಿದ್ದರು.
ಈ ಸಂದರ್ಭ ಮಕ್ಕಳಿಂದ ಕುಣಿತಭಜನೆ,ಅಭಿನಯಗೀತೆ, ಮೂಕಾಭಿನಯ,ಯೋಗಪ್ರದರ್ಶನ,ಕರಕುಶಲ ಕಲೆ ,ಪ್ರಹಸನಗಳು ವೇದಿಕೆಯಲ್ಲಿ ಮೂಡಿ ಬಂತು ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಪ್ರಾಧ್ಯಾಪಕ ಶ್ರೀಧರ ಕೆ ಅಳಿಕೆ, ಅಧ್ಯಾಪಕ ಪ್ರವೀಣ್ ಅಳಿಕೆ, ಅಧ್ಯಾಪಕ ಸಂಜೀವ ಯಂ.,ಯೋಗಿಶ್ ನರಿಕೊಂಬು,ನಳಿನಿ ವಿಶ್ವಕರ್ಮ ಮಾಣಿಲ,ಜಯಲಕ್ಷ್ಮಿಅಚಾರ್ಯ ಕನ್ಯಾನ, ಸಿಂಚನ ಅಳಿಕೆ ಇವರನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಧಕೃಷ್ಣ ಕನ್ಯಾನ ಇವರಿಂದ ಜಾದೂಪ್ರದರ್ಶನ ಪ್ರದರ್ಶನಗೊಂಡಿತು. ಶಿಬಿರದ ಸಂಘಟಕ ಸಂಸ್ಕಾರ ಭಾರತೀಯ ಸದಸ್ಯ ಸದಾಶಿವ ಅಳಿಕೆ ಪ್ರಸ್ತಾವನೆಗೈದರು, ಶಿಬಿರಾರ್ಥಿ ಮೋನಿಷಾ ಸ್ವಾಗತಿಸಿ, ಶಿಬಿರ ನಿರ್ವಾಹಕಿ ಲೀಲಾವತಿ ರಾಮಗೌಡ ಧನ್ಯವಾದವಿತ್ತರು. ಶಿಬಿರ ನಿರ್ವಾಹಕಿ ರಜನಿ ಹರೀಶ್ ಶೆಟ್ಟಿ, ಕು.ಕಾವ್ಯಶ್ರೀ,ಕು.ಪಯಸ್ವಿನಿ ಸಹಕರಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಭಾರತಾಂಬೆಯ ಭಾವಚಿತ್ರ, ಲೇಖನಿ ವಿತರಿಸಲಾಯಿತು. 70 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

