ಪುತ್ತೂರು: ವಿದ್ಯಾರ್ಥಿ ಬದುಕಿನಲ್ಲಿ ಎನ್ಎಸ್ಎಸ್ ನಲ್ಲಿನ ಭಾಗವಹಿಸುವಿಕೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದಂತಹ ವೇದಿಕೆಯನ್ನು ಕಲ್ಪಿಸುತ್ತಿದೆ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಉದ್ದೇಶವನ್ನು ಒಳಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಹೊಸ ಶಿಕ್ಷಣಪದ್ಧತಿಯಲ್ಲಿ ಮಹತ್ವವನ್ನು ಹೆಚ್ಚಿಸಿಕೊಂಡಿದೆ ಎಂದು ಪುತ್ತೂರಿನ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಹೇಳಿದರು.

ಅವರು ಮೂಡಂಬೈಲು ಶಾಲೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ರವರು ಮಾತನಾಡುತ್ತಾ ಎನ್ಎಸ್ಎಸ್ ಶಿಬಿರವು ಕಾಲೇಜು- ಶಾಲೆ-ಸಮಾಜದ ನಡುವಿನ ಸಂಬಂಧ ವೃದ್ಧಿಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ ಎಂದು ಹೇಳಿದರು.

ಮೂಡಂಬೈಲು ಶಾಲೆಯ ಶಿಕ್ಷಕರಾದ ಅರವಿಂದ ಕುಡ್ಲ ರವರು ಮಾತನಾಡಿ, ಮೂಡಂಬೈಲು ಪರಿಸರಕ್ಕೆ ಆಗಮಿಸಿದ ಶಿಬಿರಾರ್ಥಿಗಳಿಗೆ ಶಾಲೆ, ಊರಿನವರಿಂದ ಸಂಪೂರ್ಣ ಸಹಕಾರ ದೊರೆಯುವುದು ಎಂದು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿಬಿರಾಧಿಕಾರಿಗಳಾದ ಹರಿಪ್ರಸಾದ್ ಎಸ್ ರವರು ಈ ವರ್ಷದ ಶಿಬಿರವು ಅಮೃತ ಸಮುದಾಯ ಯೋಜನೆಯ ಅನುಷ್ಠಾನದ ಜೊತೆಯಲ್ಲಿ ಗುರುತಿಸಿಕೊಂಡದ್ದು, ವಿಶೇಷವಾಗಿದ್ದು ಘನತ್ಯಾಜ್ಯ ವಿಲೇವಾರಿ, ಭಾರತೀಯ ಸಂಸ್ಕೃತಿಯ ಪರಿಚಯಿಸುವಿಕೆ ಮತ್ತು ಪಾಲನೆ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ, ಇತಿಹಾಸ ಸ್ಥಳಕ್ಕೆ ಭೇಟಿ, ಮೊದಲಾದ ಉದ್ದೇಶಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಣಚ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ರಾಮಕೃಷ್ಣ ಮೂಡಂಬೈಲು, ಉಪಾಧ್ಯಕ್ಷರಾದ ಪ್ರತಿಭಾ ಜಗನ್ನಾಥ ಗೌಡ, ಸದಸ್ಯರುಗಳಾದ ಅಶೋಕ್ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷರಾದ ಆನಂದ ನಾಯ್ಕ, ಮುಖ್ಯಗುರುಗಳಾದ ಬಾಬು ನಾಯ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು.