ಪುತ್ತೂರು: ಹಿಂದೂ-ಮುಸ್ಲಿಂ ಗಲಾಟೆಯಲ್ಲಿ ಯಾರಾದರೂ ಮುಸಲ್ಮಾನ ಆರೋಪಿಗಳಿದ್ದರೆ ಅವರೆಲ್ಲಾ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್ ಹುಟ್ಟು ಹಾಕಿದ ರಾಷ್ಟ್ರೀಯ ಮುಸ್ಲಿಂ ಮಂಚ್ ಸಂಘಟನೆಯ ಕಾರ್ಯಕರ್ತರು ಎಂದು ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಕೆ.ಸಿ.ಅಶ್ರಫ್ ಆರೋಪಿಸಿದ್ದಾರೆ.
ಎಸ್.ಡಿ.ಪಿ.ಐ ಮುಖಂಡರ ಮನೆ ಮೇಲೆ ಎನ್‌ಐಎ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಎಸ್ ಡಿ ಪಿಐ ವತಿಯಿಂದ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಸೆ.12 ರಂದು ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಜಿಲ್ಲೆಯಲ್ಲಿ ನಡೆದ ಮೂರು ಕೊಲೆಗಳು ಖಂಡನೀಯ. ಕೊಲೆಯಿಂದ ಯಾವುದೇ ರಾಜಕೀಯ ಪಕ್ಷ ಮತ್ತು ಸಂಘಟನೆ, ಧರ್ಮ ಕಟ್ಟಲು ಸಾಧ್ಯವಿಲ್ಲ ಎಂದ ಅವರು, ಮೋದಿ ಬಂದ ಬಳಿಕ ಪಾಕಿಸ್ತಾನ, ಚೈನಾದವರನ್ನು ಬಂಧಿಸಿಲ್ಲ. ಬದಲಾಗಿ ಸರಕಾರದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ 10,550 ಮಂದಿ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದ ಈ ದೇಶದ ಮಣ್ಣಿನ ಮಕ್ಕಳನ್ನು ಬಂದಿಸಿದ್ದಾರೆ. ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಹೊರಟಿರುವ ಸರಕಾರದ ವಿರುದ್ಧ ಧ್ವನಿ ಎತ್ತಲೇ ಬೇಕು. ಇದು ಒಂದು ಪಕ್ಷದ ಹೋರಾಟವಲ್ಲ. ಎಲ್ಲಾ ಪಕ್ಷಗಳು ಒಂದುಗೂಡಿ ಇದರ ವಿರುದ್ಧ ಹೋರಾಟ ಮಾಡಲೇಬೇಕು ಎಂದರು.
ಎನ್‌ಐಎ ರಿಯಾಝ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದಾಗ ಮೂರು ಮೊಬೈಲ್, ಒಂದು ಬ್ರೋಷರು, ಸ್ಮರಣಿಕೆ ಮಾತ್ರ ಸಿಕ್ಕಿರುವುದು. ಅದೇ ಆರ್‌ಎಸ್‌ಎಸ್ ಕಚೇರಿ ಮೇಲೆ ದಾಳಿ ನಡೆಸಿದರೆ ಎಲ್ಲವೂ ಸಿಗಬಹುದು. ಇವತ್ತು ಕ್ರಿಮಿನಲ್ ಹತ್ಯೆಯಲ್ಲಿ ಕೆಲವೊಂದು ಮುಸಲ್ಮಾನರು ತೊಡಗಿಸಿಕೊಳ್ಳುತ್ತಾರೆ. ಎಮ್.ಆರ್.ಎಂ.(ರಾಷ್ಟ್ರೀಯ ಮುಸ್ಲಿಂ ಮಂಚ್) ಏಜೆಂಟ್ ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಪ್ರಮುಖರು. ಪ್ರವೀಣ್ ಹತ್ಯೆ ಮಾಡಿದವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು. ಪರೇಸ್ ಮೇಸ್ತಾ ಸಾವಿನಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿ ಬಂದ ವ್ಯಕ್ತಿಗೆ ಬಿಜೆಪಿ ವಕ್ಸ್ ಬೋರ್ಡ್ನಲ್ಲಿ ಸ್ಥಾನಕೊಟ್ಟಿದೆ. ಹುಬ್ಬಳಿಯಲ್ಲಿ ಪೊಲೀಸ್ ಸ್ಟೇಷನ್‌ಗೆ ಕಲ್ಲು ಹೊಡೆದದವರಲ್ಲಿ ಹೆಚ್ಚಿನವರು ಮುಸ್ಲಿಂ ಬಿಜೆಪಿ ಕಾರ್ಯಕರ್ತರು, ಬಿಜೆಪಿಯವರ ರಾಜಕೀಯ ಲಾಭಕ್ಕಾಗಿ ನಾಮಧಾರಿ ಮುಸಲ್ಮಾನರನ್ನು ಬಳಸಿಕೊಳ್ಳುತ್ತಿದ್ದಾರೆ. ಎನ್‌ಐಎ ತನಿಖೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚದವರ ಮನೆಯಲ್ಲೂ ಮಾಡಲಿ. ಆಗ ಯಾರು ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿ ಹೊರ ಬರುತ್ತದೆ. ನಾಮಧಾರಿ ಮುಸ್ಲಿಂರಿಂದಾಗಿ ಇಡೀ ಮುಸ್ಲಿಂಸಮಾಜ ಪರಿಣಾಮ ಎದುರಿಸುವ ಸ್ಥಿತಿಯುಂಟಾಗಿದೆ ಎಂದರು.
ಪ್ರವೀಣ್, ಫಾಝಿಲ್ ಮತ್ತು ಮಸೂದ್ ಕೊಲೆಯಲ್ಲಿ ಒಂದೇ ಒಂದು ಕೊಲೆಯನ್ನು ಎನ್‌ಐಎಗೆ ಕೊಡುವ ವಿಚಾರ ಯಾಕೆ ಎಂದು ಪ್ರಶ್ನೆ ಮಾಡಬೇಕಾಗಿದೆ ಎಂದ ಅವರು ಇವತ್ತಿಗೂ ಪ್ರವೀಣ್ ನೆಟ್ಟಾರು ಕೊಲೆಯಲ್ಲಿ ಬಿಜೆಪಿಯ ಉನ್ನತ ವ್ಯಕ್ತಿಯ ಕೈವಾಡ ಇದೆ ಎಂದು ಗೊತ್ತಿದೆ. ಪ್ರವೀಣ್ ಪೇಸ್ ಬುಕ್ ಪೋಸ್ಟರ್‌ನಲ್ಲಿ ಇಲ್ಲಿನ ಸಂಸದ ವಿರುದ್ಧ ಹಾಕಿದ ಪೋಸ್ಟರ್ ಇದೆ. ಡಿವಿ ಸದಾನಂದ ಗೌಡರ ಜಾತಿ ರಾಜಕಾರಣದ ವಿರುದ್ಧ ಹಾಕಿದ ಪೋಸ್ಟ್ ಇದೆ. ಇದನ್ನು ಯಾಕೆ ತನಿಖೆ ಮಾಡಲು ಆಗುತ್ತಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದ ವೇಳೆ ಅದನ್ನು ಏಕಾಏಕಿ ಎನ್‌ಐಎಗೆ ಕೊಡುವ ಉದ್ದೇಶವೇನು ಎಂದು ಕೆ.ಸಿ.ಅಶ್ರಫ್ ಪ್ರಶ್ನಿಸಿದರು.
ಎಸ್.ಡಿ. ಪಿ. ಐ ಪಕ್ಷದ ರಾಜ್ಯಪ್ರಧಾನ ಕಾರ್ಯದರ್ಶಿ ಎಲ್. ಕೆ. ಅಬ್ದುಲ್ ಲತೀಫ್, ವಿಮೆನ್ಸ್ ಇಂಡಿಯಾ ಮೂಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರೀಯಾ ಬೆಳ್ಳಾರೆ, ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿದರು.
ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವು, ನಗರ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ನಗರಸಭಾ ಸದಸ್ಯೆ ಪಾತಿಮಾತ್ ಝೋರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಸ್ವಾಗತಿಸಿದರು. ಸದಸ್ಯ ಅಬ್ದುಲ್ ರಹಿಮ್ ವಿಟ್ಲ ವಂದಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನೆಯಲ್ಲಿ ಯಯ್ಯಾ ಕೂರ್ನಡ್ಕ, ಕಬಕ ಗ್ರಾ.ಪಂ ಸದಸ್ಯ ಫಾರೂಕ್, ನಗರ ಸಭಾ ಸಮಿತಿ ಅಧ್ಯಕ್ಷ ಸಿದ್ಧಿಕ್ ಕೂರ್ನಡ್ಕ, ವಿಧಾನ ಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅನ್ವರ್ ಪೆರುವಾಯಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
