ಕಲ್ಲಡ್ಕದಲ್ಲಿ ಹೊಸದಾದ ಈಜುಕೊಳವೊಂದು ಆರಂಭಗೊಂಡಿದ್ದು, ಸಾರ್ವಜನಿಕರಿಗೆ ಈಜುಕೊಳದಲ್ಲಿ ಜಲಕ್ರೀಡೆಯಾಡಲು ಮುಕ್ತ ಅವಕಾಶ ನೀಡಲಾಗಿದೆ..
ಹೌದು.. ಮಂಗಳೂರು-ಬೆಂಗಳೂರು, ಮಂಗಳೂರು-ಮೈಸೂರು, ಮಂಗಳೂರು-ವಿಟ್ಲ-ಕಾಸರಗೋಡು ತೆರಳುವ ವೇಳೆ ಸಿಗುವ ಕಲ್ಲಡ್ಕ ಪೇಟೆಯ ಮಧ್ಯದಲ್ಲಿ ಚತುಷ್ಪದ ರಸ್ತೆ ಕಾಮಗಾರಿ ಹಿನ್ನೆಲೆ ಬೃಹತ್ ಹೊಂಡ ಒಂದನ್ನು ನಿರ್ಮಾಣ ಮಾಡಲಾಗಿದ್ದು, ಈ ಹೊಂಡದಲ್ಲಿ ಮಳೆಯಿಂದಾಗಿ ನೀರು ತುಂಬಿಕೊಂಡಿದೆ. ವ್ಯಕ್ತಿಯೋರ್ವ ಆ ಹೊಂಡದ ನೀರಿನಲ್ಲಿ ಸ್ನಾನ ಮಾಡುವ ದೃಶ್ಯದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆ.ಎನ್.ಆರ್.ಸಿ. ಅವರು ರಸ್ತೆ ಕಾಮಗಾರಿ ವೇಳೆ ಈ ಹೊಂಡ ನಿರ್ಮಾಣ ಮಾಡಿದ್ದು, ಮಳೆಯಿಂದಾಗಿ ಆ ಹೊಂಡದಲ್ಲಿ ನೀರು ತುಂಬಿ ಅದು ಈಜುಕೊಳದಂತಾಗಿದೆ. ಅದರಲ್ಲಿ ವ್ಯಕ್ತಿಯೋರ್ವ ಇಳಿದು ಸ್ನಾನ ಮಾಡುತ್ತಿರುವುದನ್ನು ಸಾರ್ವಜನಿಕರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು, ರಸ್ತೆ ಕಾಮಗಾರಿಯವರ ನಿರ್ಲಕ್ಷಕ್ಕೆ ಕಿಡಿಕಾರಿದ್ದಾರೆ.
ವ್ಯಕ್ತಿ ಕುಡಿದ ಮತ್ತಿನಲ್ಲಿ ನೀರಿಗೆ ಇಳಿದು ಸ್ನಾನ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಭಾರೀ ವೈರಲ್ ಆಗುತ್ತಿದೆ..