ನವದೆಹಲಿ: ಸಮುದಾಯಗಳ ನಡುವೆ ದ್ವೇಷ ಹರಡಲು ನಕಲಿ ಸುದ್ದಿ ಪ್ರಸಾರ ಮಾಡುತ್ತಿದ್ದ 10 ಚಾನಲ್‌ಗಳ 45 ಯುಟ್ಯೂಬ್ ವೀಡಿಯೋ ಗಳನ್ನ ಕೇಂದ್ರ ಸರ್ಕಾರ ನಿಷೇಧಿಸಿದೆ.
ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳುವುದು, ಸಮುದಾಯದ ವಿರುದ್ಧ ಹಿಂಸಾತ್ಮಕ ಬೆದರಿಕೆ ಹಾಕುವುದು ಅಥವಾ ದೇಶದಲ್ಲಿ ಅಂತರ್ಯುದ್ಧ ಘೋಷಣೆಯಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ವೀಡಿಯೋಗಳನ್ನ ನಿರ್ಬಂಧಿಸುವಂತೆ ಆದೇಶಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಇಂದು ಆದೇಶಿಸಿದ್ದಾರೆ.
10 ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದ ಈ 45 ವೀಡಿಯೋಗಳು ಸಮಯದಾಯಗಳ ನಡುವೆ ದ್ವೇಷ ಹುಟ್ಟಿಸುವಂತವಾಗಿದ್ದವು, ತಪ್ಪು ಕಲ್ಪನೆಯನ್ನು ಹೊಂದಿದ್ದವು. ಒಟ್ಟಾರೆ 1.30 ಕೋಟಿಗೂ ಅಧಿಕ ಮಂದಿ ಈ ವೀಡಿಯೋಗಳನ್ನ ವೀಕ್ಷಿಸಿದ್ದರು. ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಗೌರವಿಸುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ.
ಬ್ಲಾಕ್ ಮಾಡಲಾಗಿರುವ ವೀಡಿಯೋಗಳ ಪೈಕಿ ಕೆಲವು ವೀಡಿಯೋಗಳು ಅಗ್ನಿಪಥ್ ಯೋಜನೆ, ಭಾರತೀಯ ಸೇನೆ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುವಂತವಾಗಿದ್ದವು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಡುವಿನ ಗಡಿ ರೇಖೆಯನ್ನು ತಪ್ಪಾಗಿ ಬಿಂಬಿಸಿದ ರೀತಿಯಲ್ಲಿ ವೀಡಿಯೋ ಪ್ರಸಾರ ಮಾಡಲಾಗಿತ್ತು. ಈ ವಿಷಯಗಳು ಅತಿಸೂಕ್ಷ್ಮ ಹಾಗೂ ಸುಳ್ಳು ಎಂಬುದು ಗೊತ್ತಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ನಿಯಮ-2021ರ ಅಡಿಯಲ್ಲಿ ಈ ವೀಡಿಯೊಗಳನ್ನು ಬ್ಲಾಕ್ ಮಾಡಲು ಸೆಪ್ಟೆಂಬರ್ 23ರಂದು ಆದೇಶ ಹೊರಡಿಸಲಾಗಿತ್ತು ಎಂದೂ ಪ್ರಕಟಣೆ ತಿಳಿಸಿದೆ.