ಬೆಂಗಳೂರಿನ ವಿವಿಪುರಂನಲ್ಲಿ ನಡೆಯುತ್ತಿರುವ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಶಾಸಕ ಉದಯ್ ಗರುಡಾಚಾರ್ ಪ್ರತಿಕ್ರಿಯೆ ನೀಡಿದ್ದು, ಹಿಂದೂ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಿವಿ ಪುರಂನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು, ದರ್ಶನ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದರು, ಜಾತ್ರೆಯಲ್ಲಿ ಗಲಭೆಗಳಿಗೆ ಅವಕಾಶ ಇಲ್ಲ. ಹಾಗೇನಾದ್ರೂ ಗಲಭೆ ಮಾಡಲು ಮುಂದಾದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀನಿ. ಶಾಸಕ ಸ್ಥಾನದಲ್ಲಿ ಕುಳಿತ ಮೇಲೆ ನನಗೆ ಜಾತಿ, ಧರ್ಮದ ಬೇಧಭಾವ ಇಲ್ಲ. ಎಲ್ಲಾ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ಮನೆಯಲ್ಲಿ ಬ್ರಾಹ್ಮಣ, ಆಚೆ ಬಂದರೆ ನಾನು ವಿಶ್ವ ಮಾನವ. ದರ್ಗಾ, ಮಸೀದಿಗಳ ಮುಂದೆ ಹಿಂದೂಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರುವ ವಿಷಯ ನನ್ನ ಗಮನಕ್ಕೆ ತಂದಿಲ್ಲ ಎಂದರು.
ಉದ್ದೇಶಪೂರ್ವಕವಾಗಿ ಮಾಡ್ತಿರೋ ತರಲೆ..!!
ಕೆಲ ಹಿಂದೂ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ತರಲೆ ಮಾಡುತ್ತಿದ್ದಾರೆ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದರು.