ದೆಹಲಿಯಲ್ಲಿ ತನ್ನ ಲಿವಿಂಗ್ ಟುಗೆದರ್ ಸಂಗಾತಿ ಶ್ರದ್ದಾ ವಾಕರ್ನ್ನು ಕೊಂದು ಮೃತದೇಹವನ್ನು ತುಂಡು ಮಾಡಿ ಫ್ರಿಡ್ಜ್ನಲ್ಲಿರಿಸಿ ನಂತರ ಅದನ್ನು ಅರಣ್ಯದಲ್ಲಿ ಬಿಸಾಡಿದ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ದೆಹಲಿಯಲ್ಲಿ ದಾಳಿ ನಡೆದಿದೆ.
ಅಫ್ತಾಬ್ ಅಮೀನ್ ಪೂನಾವಾಲಾ ಶ್ರದ್ಧಾ ವಾಕರ್ ಮೃತದೇಹವನ್ನು ಕತ್ತರಿಸಲು ಬಳಸಿದ ಆಯುಧವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೂನಾವಾಲಾ ಇನ್ನೊಬ್ಬ ಮಹಿಳೆಗೆ ನೀಡಿದ್ದ ಎನ್ನಲಾದ ಶ್ರದ್ಧಾಳ ಉಂಗುರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಪಾಲಿಗ್ರಾಫ್ ಪರೀಕ್ಷೆಯ ನಂತರ ಪೊಲೀಸ್ ವ್ಯಾನ್ ಪೂನಾವಾಲಾನನ್ನು ಪಶ್ಚಿಮ ದೆಹಲಿಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಜೈಲಿಗೆ ಕರೆದೊಯ್ಯುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಎಫ್ಎಸ್ಎಲ್ ಕಟ್ಟಡದ ಹೊರಭಾಗದಲ್ಲಿ ಈ ದಾಳಿ ನಡೆದಿದೆ. ಕತ್ತಿ ಹಿಡಿದ ಜನರು ವ್ಯಾನ್ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಅಫ್ತಾಬ್ ಪೂನಾವಾಲಾ ಸುರಕ್ಷಿತವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದಾಳಿಕೋರರಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ಹತ್ಯೆ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ನ ಮೇಲೆ ದೆಹಲಿಯ ಎಫ್ಎಸ್ಎಲ್ ಕಚೇರಿಯ ಹೊರಗೆ ಹಿಂದೂ ಸೇನೆಯೆಂದು ಹೇಳಿಕೊಳ್ಳುವ ಇಬ್ಬರು ವ್ಯಕ್ತಿಗಳು ಕತ್ತಿ ಝಳಪಿಸಿ ದಾಳಿ ನಡೆಸಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ವರದಿಗಳ ಪ್ರಕಾರ, ವ್ಯಾನ್ಗೆ ಕಾವಲು ಕಾಯುತ್ತಿದ್ದ ಪೊಲೀಸ್ ಸಿಬ್ಬಂದಿ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.ದಾಳಿಕೋರರನ್ನು ಬಂಧಿಸಿ ಅವರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಾಗ ವಾಹನವನ್ನು ಅಲ್ಲಿಂದ ಓಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಘಟನೆ ಸಂಜೆ 6. 45 ರ ಸುಮಾರಿಗೆ ನಡೆದಿದೆ ಎಂದು ತಿಳಿದು ಬಂದಿದೆ..