ಕೊಪ್ಪಳ : ರಕ್ತದಾನ ಶ್ರೇಷ್ಠ ದಾನ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಸೂಕ್ತ ಸಮಯದಲ್ಲಿ ರಕ್ತ ಸಿಗದೆ ಅನೇಕರು ಮೃತಪಡುತ್ತಿರುವ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮನುಷ್ಯರೇ ಮನುಷ್ಯರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಹಿಂದುಮುಂದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಒಂದು ನಾಯಿ ಇನ್ನೊಂದು ನಾಯಿ ಜೀವ ಉಳಿಸಲು ರಕ್ತದಾನ ಮಾಡಿರುವ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇದು ಅಚ್ಚರಿಯನಿಸಿದರು ಕೂಡಾ ನಿಜ.
ಕೊಪ್ಪಳದಲ್ಲಿ ಸಾಕಿದ ನಾಯಿಯೊಂದು ಮತ್ತೊಂದು ನಾಯಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ. ನಗರದ ಪಶು ಚಿಕಿತ್ಸಾಲಯದಲ್ಲಿ, ಪ್ರಾಧ್ಯಾಪಕ ಬಸವರಾಜ ಪೂಜಾರ್ರವರ ಸಾಕು ನಾಯಿ ಮೂರು ವರ್ಷದ ಭೈರವನಿಂದ (ಡಾಬರ್ ಮ್ಯಾನ್) ರಕ್ತದಾನ ಮಾಡಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ, ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ನಗರದ್ದೇ ಆದ 9 ವರ್ಷದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅತ್ಯವಶ್ಯಕವಾಗಿತ್ತು. ಇದನ್ನು ಅರಿತ ವೈದ್ಯರು ನಗರದ ಮೂರು ನಾಯಿಗಳ ಮಾಲೀಕರ ವಿಳಾಸಗಳನ್ನು ಸಂಪರ್ಕಿಸಿ ಕರೆಸಿ ಅವುಗಳ ರಕ್ತದ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಿದರು.
ಮೂರು ನಾಯಿಗಳ ಸ್ಯಾಂಪಲ್ಗಳಲ್ಲಿ ಪ್ರೊ. ಬಸವರಾಜ್ ಪೂಜಾರ್ ಅವರ 3 ವರ್ಷದ ಡಾಬರ್ಮ್ಯಾನ್ ತಳಿಯ ರಕ್ತವು ಹೊಂದಿಕೆಯಾಗಿದ್ದು, ವೈದ್ಯಕೀಯ ನಿಯಮಾನುಸಾರ ಇದರ 300 ಎಮ್ಎಲ್ ರಕ್ತವನ್ನು ಪರೀಕ್ಷಿಸಿದ ಬಳಿಕ ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬರ್ ಡಾಗ್ಗೆ ನೀಡಲಾಗಿದೆ.
ದಾನಗಳಲ್ಲಿ ರಕ್ತದಾನವೆ ಶ್ರೇಷ್ಠ ದಾನ. ಇದಕ್ಕೆ ಪ್ರಾಣಿಗಳೂ ಕೂಡ ಸಾಥ್ ಕೊಡಬಲ್ಲವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.