ಪುತ್ತೂರು: ದರ್ಭೆಯಲ್ಲಿನ ಅಂಗಡಿಯೊಂದರಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯ ಸಂದೇಶವನ್ನು ಪ್ರಸಾರ ಮಾಡಿ ಬಂದ್‌ಗೆ ಕರೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯು ವಾಟ್ಸಾಪ್ ಮೂಲಕ ಆಕ್ಷೇಪಾರ್ಹ ಸಂದೇಶವನ್ನು ಪ್ರಸಾರ ಮಾಡಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ರೀತಿಯಲ್ಲಿ ಜನರನ್ನು ಬಂದ್‌ಗೆ ಕರೆದು, ಅಕ್ರಮಕೂಟ ಸೇರಲು ಹಾಗೂ ಕಾನೂನುಬಾಹಿರ ಕೃತ್ಯವೆಸಗಲು ದುಷ್ಪ್ರೇರಣೆ ನೀಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 100/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 353(2), 57 ಮತ್ತು 189ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




























