ಸುಳ್ಯ: ಕಲ್ಮಡ್ಕದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಮೃತರು ಬಾವ ಮತ್ತು ಬಾಮೈದ ಎಂದು ತಿಳಿದುಬಂದಿದೆ.
ಕಲ್ಮಡ್ಕದ ಬೊಮ್ಮೆಟ್ಟಿ ಬಾಬು–ಸೀತಾ ದಂಪತಿಯ ಪುತ್ರ ಭರತ್ (28) ಹಾಗೂ ಭರತ್ ಅವರ ಸಹೋದರಿ ಭವ್ಯಾ ಅವರ ಪತಿ, ಬೆಳ್ತಂಗಡಿ ತಾಲೂಕಿನ ಮುಂಗೆಲು ನಿವಾಸಿಗಳಾದ ವೀರಪ್ಪ–ಸೀತಮ್ಮ ದಂಪತಿಯ ಪುತ್ರ ರಮೇಶ್ (34) ಮೃತಪಟ್ಟವರು.
ಅ. 12ರಂದು ರಾತ್ರಿ ಭರತ್, ರಮೇಶ್ ಹಾಗೂ ಅವರ ಸಂಬಂಧಿ ಯುವಕ ಸಿಂಚನ್ ಮೂವರು ಮೀನು ಹಿಡಿಯಲೆಂದು ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ತೋಡಿಗೆ ತೆರಳಿದ್ದರು. ರಾತ್ರಿ 10.30ರ ಸುಮಾರಿಗೆ ತೋಡಿನ ಮೇಲ್ಭಾಗದಲ್ಲಿ ಕಟ್ಟಲಾಗಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ದಾಟುವಾಗ ಭರತ್ ಮತ್ತು ರಮೇಶ್ ಅವರಿಗೆ ತಂತಿ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಿಂಚನ್ ಅವರಿಗೂ ವಿದ್ಯುತ್ ತಂತಿ ತಾಗಿ ದೂರಕ್ಕೆ ಎಸೆಯಲ್ಪಟ್ಟಿದ್ದು, ಕೈ, ಎದೆ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಬಳಿಕ ತಂತಿ ಕಟ್ಟಿದ್ದ ಮನೆಯವರಿಗೆ ಘಟನೆ ತಿಳಿದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಕಾರ್ಯ ಕೈಗೊಂಡಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಗಾಯಗೊಂಡ ಸಿಂಚನ್ ಅವರನ್ನು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.



























