ಸುಳ್ಯ: 2014 ರ ಚುನಾವಣೆಯ ಸಂದರ್ಭದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯವು ನೀಡಿರುವ ತೀರ್ಪಿನ ಬಳಿಕ ಸ್ಥಳೀಯ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರ ರಾಜೀನಾಮೆಗೆ ಆಗ್ರಹಿಸಿರುವುದು ಹಾಸ್ಯಾಸ್ಪದವಾಗಿದ್ದು, ಭೂತ- ಪಿಶಾಚಿಯ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ.ಅವರ ಪತ್ರಿಕಾಗೋಷ್ಠಿಯಲ್ಲಿದ್ದ ಕೆಲವು ನಾಯಕರು ನೈತಿಕತೆಯ ಪಾಠವನ್ನು ಉಚ್ಛರಿಸುವಾಗ ನೈತಿಕತೆ ಅರ್ಥವನ್ನೇ ಕಳೆದುಕೊಂಡಂತಾಗಿದೆ. ಅವರು ಒಂದು ಕ್ಷಣ ತಮ್ಮ ಗತ ಇತಿಹಾಸವನ್ನು ಮತ್ತು ನಡವಳಿಕೆಯನ್ನು ನೆನಪಿಸಿಕೊಳ್ಳಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಹೇಳಿದೆ.
ಇಂದು ಬಿಜೆಪಿ ಕಚೇರಿಯಲ್ಲಿ ಹಿರಿಯ ಬಿಜೆಪಿ ನಾಯಕ ಎ.ವಿ.ತೀರ್ಥರಾಮರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕರು ಮಾತನಾಡಿದರು. ಈ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಮಗೆ ಅಪಾರ ಗೌರವ ಇದೆ. ಸದ್ರಿ ತೀರ್ಪಿನ ಬಗ್ಗೆ ನಮಗೆ ಆಕ್ಷೇಪ ಇರುವುದಿಲ್ಲ. ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ. ಆ ಬಗ್ಗೆ ಮೇಲ್ಮನವಿ ಸಲ್ಲಿಸಲಾಗುವುದು. ಶ್ರೀಮತಿ ಸರಸ್ವತಿ ಕಾಮತ್‌ರವರು ದಾಖಲಿಸಿದ ದೂರು ಸುಳ್ಳು ಮತ್ತು ನಿರಾಧಾರವೆಂದು ಸಾಬೀತಾಗಲಿದ್ದು, ಹರೀಶ್ ಕಂಜಿಪಿಲಿಯವರು ಆರೋಪದಿಂದ ಮುಕ್ತರಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಎ.ವಿ.ತೀರ್ಥರಾಮರು ಹೇಳಿದರು.
ಸರಸ್ವತಿ ಕಾಮತ್ ನೀಡಿರುವ ದೂರು ದುರುದ್ಧೇಶ ಪೂರಿತ ಮತ್ತು ರಾಜಕೀಯ ಪ್ರೇರಿತ. ಚುನಾವಣಾ ಸಂದರ್ಭದಲ್ಲಿ ಆರೋಪ- ಪ್ರತ್ಯಾರೋಪಗಳು ಸರ್ವೇಸಾಮಾನ್ಯವಾಗಿದ್ದರೂ ಕಾಂಗ್ರೆಸ್‌ನ ಸರಸ್ವತಿ ಕಾಮತ್‌ರವರು ಮಹಿಳೆ ಎಂಬ ಗೌರವಯುತ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ದ್ವೇಷಕ್ಕೋಸ್ಕರ ಷಡ್ಯಂತ್ರ ಹೂಡಿ ಸುಳ್ಳು ದೂರು ನೀಡಿರುವುದು ಸ್ತ್ರೀ ಕುಲಕ್ಕೆ ಅವಮಾನ. ಬಿಜೆಪಿಯ ಎಲ್ಲಾ ಕಾರ್ಯಕರ್ತರ ಮತ್ತು ಜನ ಸಾಮಾನ್ಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಹರೀಶ್ ಕಂಜಿಪಿಲಿಯವರ ವ್ಯಕ್ತಿತ್ವ ಮತ್ತು ನಡವಳಿಕೆ ನಾಯಕತ್ವದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ.
ಅವರು ಪಕ್ಷದ ಜವಾಬ್ದಾರಿಯುತ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ. ಕಾಂಗ್ರೆಸ್‌ನವರ ನೈತಿಕತೆಯ ಪಾಠ ನಮಗೆ ಅಗತ್ಯವಿಲ್ಲ. ಪಕ್ಷ ಹರೀಶ್ ಕಂಜಿಪಿಲಿಯವರ ಮತ್ತು ಇತರ ೧೪ ಜನ ಕಾರ್ಯಕರ್ತರ ಜೊತೆಗಿರುತ್ತದೆ ಮತ್ತು ನೈತಿಕವಾಗಿ ಅವರನ್ನು ಬೆಂಬಲಿಸುತ್ತದೆ ಎಂದು ಎ.ವಿ. ತೀರ್ಥರಾಮರು ಹೇಳಿದರು.