ವಿಟ್ಲ: ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಸಮೀಪದ ಮನೆಯ ಕೆರೆಯಲ್ಲಿ ಅ.11 ರಂದು ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ವೀಡಿಯೋ ಕ್ಲಿಪ್ಪಿಂಗ್ ಆಕೆಯ ಸಾವಿಗೆ ಕಾರಣ ಎನ್ನಲಾಗಿದೆ.
ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕ ರವರ ಮಗಳು, ವಿಟ್ಲದ ಡೆಂಟಲ್ ಕ್ಲಿನಿಕ್ ವೊಂದರಲ್ಲಿ ಉದ್ಯೋಗಿಯಾಗಿದ್ದ ನಿಶ್ಮಿತಾ(22) ಆತ್ಮಹತ್ಯೆ ಮಾಡಿಕೊಂಡ ಯುವತಿ. ನಿಶ್ಮಿತಾ ಅ. 10 ರ ಸಂಜೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಮನೆಯವರು ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ.
ವಿಡಿಯೋ ಕ್ಲಿಪ್ಪಿಂಗ್ ಕಾರಣ..?
ಈ ಕುರಿತು ದೂರು ನೀಡಿರುವ ಆಕೆಯ ತಾಯಿ ಉಮಾವತಿ, ನನ್ನ ಮಗಳು ನಿಶ್ಚಿತಾ ವಿಟ್ಲ ಡೆಂಟಲ್ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ವಿಟ್ಲ ಕಸಬಾ ಗ್ರಾಮದ ಪಚ್ಚೆಗುತ್ತು ನಿವಾಸಿ ಪ್ರಶಾಂತ್ ಎಂಬಾತನನ್ನು ಕಳೆದ ಕೆಲ ವರುಷಗಳಿಂದ ಪ್ರೀತಿಸುತ್ತಿದ್ದು, ಅವರ ಮದುವೆಗೆ ನಾವು ಒಪ್ಪಿಗೆ ಸೂಚಿಸಿದ್ದೆವು. ಪ್ರತಿ ದಿನ ಪ್ರಶಾಂತ್ ಆಕೆಯನ್ನು ಕರೆದುಕೊಂಡು ಮನೆಗೆ ಬಿಡುತ್ತಿದ್ದ. ಈ ಮಧ್ಯೆ ನಿಶ್ಮಿತಾ ಕೇಪು ಗ್ರಾಮದ ನಿರ್ಕಜೆ ನಿವಾಸಿ ರಕ್ಷಿತ್ ಎಂಬಾತನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದು, ಆತನೊಂದಿಗೆ ಆಕೆ ದೂರವಾಣಿ ಸಂಪರ್ಕ ಇಟ್ಟುಕೊಂಡಿದ್ದಳು. ಈ ವಿಚಾರ ಪ್ರಶಾಂತ್‌ಗೆ ತಿಳಿದು ಆತ ನನ್ನ ಗಮನಕ್ಕೆ ತಂದಿದ್ದ. ಆ ರೀತಿ ಮಾಡದಂತೆ ನಾನು ನಿಶ್ಚಿತಾಗೆ ಬುದ್ಧಿವಾದ ಹೇಳಿದ್ದೆ. ನಿಶ್ಚಿತಾ ರಕ್ಷಿತ್‌ನೊಂದಿಗೆ ಮಾತನಾಡುತ್ತಿರುವುದನ್ನು ಕಂಡ ಪ್ರಶಾಂತನ ತಮ್ಮ ದಿನೇಶ್‌ನ ಸ್ನೇಹಿತರು ಅದನ್ನು ವೀಡಿಯೋ ರೆಕಾರ್ಡ್ ಮಾಡಿ ದಿನೇಶ್ ಗೆ ಕಳುಹಿಸಿಕೊಟ್ಟಿದ್ದರು. ಅದನ್ನು ಆತ ಪ್ರಶಾಂತ್‌ಗೆ ಕಳುಹಿಸಿಕೊಟ್ಟಿದ್ದ.
ಇದನ್ನು ಕಂಡ ಪ್ರಶಾಂತ್ ಆಕೆಯೊಂದಿಗೆ ವಿಚಾರಿಸಿ, ಸಾಯಂಕಾಲದ ವೇಳೆ ನಮ್ಮ ಮನೆಗೆ ಬಂದು ನನಗೆ ವಿಚಾರ ತಿಳಿಸಿದ್ದ.ಬಳಿಕ ನಾನು ಮಗಳಲ್ಲಿ ಈ ಬಗ್ಗೆ ವಿಚಾರಿಸಿ ಆಕೆಗೆ ಬುದ್ಧಿವಾದ ಹೇಳಿದ್ದೆ. ಕೆಲಸಕ್ಕೆ ತೆರಳಿದ್ದ ಆಕೆಯನ್ನು ಕರೆದುಕೊಂಡು ಬರಲು ನಾನು ಆಕೆ ಕೆಲಸ ಮಾಡಿಕೊಂಡಿದ್ದಲ್ಲಿಗೆ ಹೋದಾಗ ಆಕೆ ಅಲ್ಲಿರಲಿಲ್ಲ ಕೇಳಿದಾಗ ಆಕೆ ಔಷಧಿ ತೆಗೆದುಕೊಂಡು ಹೋಗಲಿದೆ ಎಂದು ಹೇಳಿ ಅಲ್ಲಿಂದ ತೆರಳಿರುವುದಾಗಿ ಅಲ್ಲಿದ್ದವರು ತಿಳಿಸಿದರು.
ಈ ಮಧ್ಯೆ ಆಕೆಗೆ ಕರೆಮಾಡಿದಾಗ ಆಕೆ ಕರೆ ಸ್ವೀಕರಿಸಲಿಲ್ಲ. ನಿಶ್ಚಿತಾ ರಕ್ಷಿತ್‌ನ ಜೊತೆ ಮಾತನಾಡಿದ್ದನ್ನು ದಿನೇಶನ ಗೆಳೆಯರು ಮೊಬೈಲ್ ಮೂಲಕ ಮಾಡಿರುವ ವೀಡಿಯೋ ಕ್ಲಿಪಿಂಗ್ ಅನ್ನು ನೋಡಿ ಅದೇ ವಿಚಾರದಲ್ಲಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಪೆಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಉಮಾವತಿಯವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.