ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ವಿಟ್ಲ ಇದರ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯ ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ, ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಕಲ್ಲಡ್ಕ ವಲಯದ 9 ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಜರಗಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ವಿಭಾಗ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ದೀಪ ಬೆಳಗಿಸಿ ಉದ್ಘಾಟಿಸಿ, ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಉತ್ತಮ ಕೆಲಸ ಕಾರ್ಯಗಳ ಮೂಲಕ ಗ್ರಾಮಾಭಿವೃದ್ಧಿ ಯೋಜನೆ ಮಾದರಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಕಲ್ಲಡ್ಕ ವಲಯ ಅಧ್ಯಕ್ಷ ರಾದ ಈಶ್ವರ ನಾಯ್ಕ್ ಮುರಬೈಲ್ ಇವರು ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ಉಪಾಧ್ಯಕ್ಷರಾದ ಕೇಶವ ಬಂಗೇರ ಮನೆಯೇ ಮಂತ್ರಾಲಯ ಮನೆಯೇ ದೇವಾಲಯ ಮನೆಯಿಂದಲೇ ಸಂಸ್ಕಾರ-ಸಂಸ್ಕೃತಿ ಯ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯ ಜಾಗೃತಿ ನಡೆಯಬೇಕು. ಶ್ರದ್ಧಾ ಕೇಂದ್ರಗಳು ನಮ್ಮನ್ನು ಒಟ್ಟುಗೂಡಿಸುವ ಶಕ್ತಿಕೇಂದ್ರ ಎಂದು ಧಾರ್ಮಿಕ ಪ್ರವಚನ ನೀಡಿದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಎ ರುಕ್ಮಯ ಪೂಜಾರಿ ಎಳ್ತಿಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ನಿರ್ದೇಶಕರಾದ ಪ್ರವೀಣ್, ಮಾಜಿ ಶಾಸಕರು ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ, ಗೊಳ್ತ ಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಭಿಷೆಕ್ ಶೆಟ್ಟಿ , ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ ಅಧ್ಯಕ್ಷರಾದ ಭಟ್ಯಪ್ಪ ಶೆಟ್ಟಿ , ಜನಜಾಗೃತಿ ವೇದಿಕೆ ಮಾಜಿ ಸದಸ್ಯರಾದ ಬಿಕೆ ಇದಿನಬ್ಬ ಒಂಬತ್ತು ಒಕ್ಕೂಟಗಳ ಮಾಜಿ ಅಧ್ಯಕ್ಷರುಗಳಾದ ಶಿವಪ್ಪಗೌಡ ,ಚೆನ್ನಪ್ಪ ಪೂಜಾರಿ ,ಸುಶೀಲಾ ಕೆ, ಜಾನಕಿ ಕೊರಗಪ್ಪ ನಾಯ್ಕ, ಈಶ್ವರ ನಾಯ್ಕ, ಹಾಗೂ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೀತಾರಾಮ್ ಶೆಟ್ಟಿ, ಮಮತಾ ಶೆಟ್ಟಿ, ಸೀತಾ , ಉಮಾವತಿ, ಈಶ್ವರ ನಾಯ್ಕ, ಶಾಂಭವಿ, ತುಳಸಿ, ಹರೀಶ್ ಉಪಸ್ಥಿತರಿದ್ದರು.
ಕಲ್ಲಡ್ಕ ವಲಯದ ಮೇಲ್ವಿಚಾರಕಿ ಸುಗುಣಾ ಶೆಟ್ಟಿ ರವರು ವರದಿ ಮಂಡಿಸಿ, ಪ್ರಸ್ತುತ ಕಲ್ಲಡ್ಕ ವಲಯವು ಕಲ್ಲಡ್ಕ, ವೀರಕಂಬ, ಬಾಳ್ತಿಲ, ಗೋಳ್ತಮಜಲು ಎ, ಗೋಳ್ತಮಜಲು ಬಿ, ಗೋಳ್ತಮಜಲು ಸಿ, ಕೆಲಿಂಜ ,ಬೋಳಂತೂರು ,ಮಾಮೇಶ್ವರ, ಮೊದಲಾದ 9 ಒಕ್ಕೂಟಗಳನ್ನು ಒಳಗೊಂಡ ವಲಯವಾಗಿದ್ದು ಸುಮಾರು 321 ಪ್ರಗತಿಬಂಧು ಸ್ವಸಹಾಯ ಗುಂಪುಗಳನ್ನು ಒಳಗೊಂಡಿದ್ದು ಒಟ್ಟಾರೆ 2804 ಸದಸ್ಯರು ಇದ್ದು. ಸಂಘದ ಸದಸ್ಯರು 1 ಕೋಟಿ 78 ಲಕ್ಷ ಉಳಿತಾಯ ಮಾಡಿದ್ದು ಅವರ ಅವಶ್ಯಕತೆಗನುಗುಣವಾಗಿ ಈ ವರ್ಷ ಸುಮಾರು 6 ಕೋಟಿ ರೂಪಾಯಿ ಸಾಲ ವಿತರಿಸಿ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಆಗುತ್ತಿದೆ ಎಂದರು.
ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತು ಅವರ ತಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ನಂತರ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಒಕ್ಕೂಟದ ಪದಗ್ರಹಣ ನಿಮಿತ್ತ ಒಕ್ಕೂಟಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಮಾಮೇಶ್ವರ ಒಕ್ಕೂಟದ ಸೇವಾ ಪ್ರತಿನಿಧಿ ಯಶೋಧ ಕಾವಂದರ ಶುಭಾಶಯ ಪತ್ರ ವಾಚಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಇದರ ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ, ಹರೀಶ್ ಮಾಮೇಶ್ವರ ಧನ್ಯವಾದಗೈದರು. ಹರೀಶ್ ಮಾಮೇಶ್ವರ ಮತ್ತು ಸಂತೋಷ್ ಕುಮಾರ್ ಬೊಲ್ಪೋಡಿ ಕಾರ್ಯಕ್ರಮ ನಿರೂಪಿಸಿದರು.