ಸುಬ್ರಹ್ಮಣ್ಯ: ಆಂಜನೇಯ ಗುಡಿ ಬಳಿಯಲ್ಲಿ ಮಲಗಿಕೊಂಡಿದ್ದ ದನಗಳನ್ನು ಕಾರಿನಲ್ಲಿ ತುಂಬಿಸಿ ಕದ್ದೋಯ್ಯಲು ಯತ್ನಿಸಿದ ಘಟನೆ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಈ ಕೃತ್ಯವೆಸಗಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದೆ.
ಮಾ. 23 ರಂದು ಮುಂಜಾನೆ ಸುಮಾರು 3.30 ಗಂಟೆಯ ಹೊತ್ತಿಗೆ ಸುಬ್ರಹ್ಮಣ್ಯದ ಅಭಯ ಆಂಜನೇಯ ಸ್ವಾಮಿ ಗುಡಿಯ ಸಮೀಪದಲ್ಲಿ ಮಲಗಿಕೊಂಡಿದ್ದ ದನವೊಂದನ್ನು ಹೊಂಚುಹಾಕಿ ಕಾರಿನಲ್ಲಿ ತುಂಬಿಸಿ ಕದ್ದುಕೊಂಡು ಹೋಗಲು ಯತ್ನಿಸಿರುವುದು ಶ್ರೀ ದೇವಳದ ಕ್ಯಾಮರಾದಲ್ಲಿ ದಾಖಲಾಗಿರುತ್ತದೆ.
ಬಿಳಿ ಬಣ್ಣದ ಇನೋವಾ ಕಾರನ್ನು ದನದ ಸಮೀಪದಲ್ಲಿ ತಂದು ನಿಲ್ಲಿಸಿ ಕಾರಿನಿಂದಿಳಿದ ಇಬ್ಬರು ವ್ಯಕ್ತಿಗಳು ದನವನ್ನು ಕಾರಿನ ಡಿಕ್ಕಿಯ ಕಡೆಗೆ ಎಳೆದು ತರಲು ಎರಡೆರಡು ಬಾರಿ ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಕಾರಿನ ರಿಜಿಸ್ಟ್ರೇಶನ್ ನಂಬರ್ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ದೇವಳದ ಪಕ್ಕದಲ್ಲೇ ಮಲಗಿಕೊಂಡಿದ್ದ ಹಸುವನ್ನು ಕದ್ದುಕೊಂಡು ಹೋಗಲು ಯತ್ನಿಸಿರುವ ವ್ಯಕ್ತಿಗಳನ್ನು ಕೂಡಲೇ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.