ವಿಟ್ಲ: ಕಾಡಿನಿಂದ ನೀರು ಅರಸಿ ಬಂದ ಕಾಡುಕೋಣವೊಂದು ನೀರಿನ ಟ್ಯಾಂಕ್ ಗೆ ಬಿದ್ದ ಘಟನೆ ವಿಟ್ಲದ ಕನ್ಯಾನದಲ್ಲಿ ನಡೆದಿದೆ.
ಕಳೆಂಜೆಮಲೆ ರಕ್ಷಿತಾರಣ್ಯ ಕಾಡಿನಿಂದ ಕಾಡುಕೋಣ ನೀರು ಹುಡುಕಿಕೊಂಡು ನಾಡಿಗೆ ಬಂದಿದ್ದು, ಕನ್ಯಾನ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್ ನಲ್ಲಿ ನೀರು ಕುಡಿಯಲು ಯತ್ನಿಸಿದಾಗ ನೇರವಾಗಿ ಕೋಣ ಟ್ಯಾಂಕ್ ಗೆ ಜಾರಿ ಬಿದ್ದಿದೆ. ಟ್ಯಾಂಕ್ ಆಳವಾಗಿದ್ದ ಹಿನ್ನಲೆ ಇದರಿಂದ ಮೇಲೆ ಬರಲಾಗದೆ ಟ್ಯಾಂಕ್ ನೊಳಗಡೆ ಕೋಣ ಬಾಕಿಯಾಗಿದೆ ಎನ್ನಲಾಗಿದೆ.

ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಬೆಳಿಗ್ಗೆ ಆಶ್ರಮ ನಿವಾಸಿಗಳು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಶಾಖೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು,, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಟ್ಯಾಂಕ್ ನಿಂದ ನೀರು ಖಾಲಿ ಮಾಡಲಾಗುತ್ತಿದ್ದು, ಅದರ ಮೂಲಕ ಕೋಣವನ್ನು ರಕ್ಷಿಸಲಾಗುತ್ತದೆ. ಟ್ಯಾಂಕ್ 5 ಅಡಿ ಆಳವಿದ್ದು, ಕೋಣಕ್ಕೆ ಯಾವುದೇ ಗಾಯಗಳಾಗಿಲ್ಲ ಎಂದು ಅರಣ್ಯ ಸಿಬ್ಬಂದಿಗಳು ತಿಳಿಸಿದ್ದಾರೆ.