ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ‘JOIN CFI’ ಎಂದು ವಿವಾದಾತ್ಮಕ ಗೋಡೆ ಬರಹ ಬರೆಯಲಾಗಿದೆ.
ಪಟ್ಟಣದ 9 ಕ್ಕೂ ಹೆಚ್ಚು ಕಡೆ ಗೋಡೆ ಬರಹ ಬರೆಯಲಾಗಿದೆ. ನೀಲಿ, ಕೆಂಪು ಬಣ್ಣದ ಸ್ಪೇಯಿಂದ ಬರೆದು ಸ್ಟಾರ್ ಇಡಲಾಗಿದೆ.
ಹಳೇ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ವಿದ್ಯುತ್ ಕಂಬದ ಮೇಲೆ, ಚಂದ್ರಪ್ಪ ಎಂಬವರ ಮನೆಯ ಕ್ರಾಸ್ನ ವಿದ್ಯುತ್ ಕಂಬ, ಬಿಲಾಲ್ ಎಂಬವರ ಮನೆಯ ಬಳಿ ಇರುವ ಗ್ಯಾರೇಜ್ ಗೋಡೆ, ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆಯ ಬಾಜುವಿನ ಗೋಡೆ, ಹಾಗೂ ಫಾರೂಕ್ ಮತ್ತು ಬಿಲಾಲ್ ಮನೆಯ ಗೋಡೆಗಳ ಮೇಲೆ ಬರಹ ಬರೆಯಲಾಗಿದೆ.
ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಲಾಗಿದೆ. ಸದ್ಯ ಖಾಕಿ ಪಡೆ ಯಾರು ಬರೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಬಲೆ ಬೀಸಿದೆ.