ಮಂಗಳೂರು : ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಬ್ರಹ್ಮರಥೋತ್ಸವ ನಡೆಸಿದ ಕಾರಣಕ್ಕೆ ಕ್ಷೇತ್ರದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ ರಾಜೇಂದ್ರ ಸೂಚಿಸಿದ್ದಾರೆ.
ಬ್ರಹ್ಮರಥೋತ್ಸವದ ವಿಡಿಯೋವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಂಗಳೂರು ತಹಸೀಲ್ದಾರ್ ಗೆ ಸೂಚನೆ ನೀಡಿದ್ದಾರೆ. ಅಲ್ಲದೆ ದೇವಾಲಯದ ಆಡಳಿತ ಮಂಡಳಿಯವರ ವಿರುದ್ದ ಎಫ್ ಐ ಆರ್ ದಾಖಲು ಮಾಡುವಂತೆ ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಕಠಿಣ ನಿಯಮದ ನಡುವೆಯೂ ಬ್ರಹ್ಮಕಲಶೋತ್ಸವ ಮತ್ತು ಬ್ರಹ್ಮರಥೋತ್ಸವ ನಡೆಸಿದ ಆಡಳಿತ ಮಂಡಳಿ ವಿರುದ್ಧ ಸುಮ್ಮನಿದ್ದ ಕಾರ್ಯನಿರ್ವಹಣಾಧಿಕಾರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ. ನಿಯಮ ಪಾಲನೆ ಮಾಡದಿದ್ದರೂ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಉತ್ತರಿಸಲು ಸೂಚಿಸಲಾಗಿದೆ.