ಪುತ್ತೂರು: ಹಿಂದೂ ಕಾರ್ಯಕರ್ತರ ವಿರುದ್ಧ ನಿರಂತರ ಸುಳ್ಳು ಕೇಸ್ ದಾಖಲಿಸಿ ದೌರ್ಜನ್ಯ ಎಸಗುತ್ತಿರುವ ಆರೋಪದಲ್ಲಿ ಪುತ್ತೂರು ಡಿವೈಎಸ್ಪಿ ಗಾನ ಕುಮಾರಿ ವಿರುದ್ಧ ಬೃಹತ್ ಹೋರಾಟಕ್ಕೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.
ಮಾ. 21 ರಂದು ಡಿವೈಎಸ್ಪಿ ಕಛೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದು, ಕಾರ್ಯಕರ್ತರನ್ನು ನ್ಯಾಯಾಲಯಕ್ಕೆ ಕುಣಿಸುವ ಕೆಲಸದಲ್ಲಿ ಪುತ್ತೂರು ಡಿವೈಎಸ್ಪಿ ಗಾನ.ಪಿ.ಕುಮಾರ್ ನಿರತರಾಗಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಡಾ.ಎಮ್.ಕೆ ಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಹಿಂದೂ ಕಾರ್ಯಕರ್ತರ ಮೇಲೆ ನೀಡಲಾಗುವ ಸುಳ್ಳು ದೂರುಗಳನ್ನು ಸಮರ್ಪಕವಾಗಿ ತನಿಖೆ ನಡೆಸದೆ, ಹಿಂದೂ ವಿರೋಧಿ ನೀತಿಯನ್ನು ಇಲಾಖೆ ಅನುಸರಿಸುತ್ತಿದೆ. ಈ ರೀತಿಯ ಹಲವು ಪ್ರಕರಣಗಳು ಹಿಂದೂ ಜಾಗರಣ ವೇದಿಕೆಯ ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಈ ಮುತ್ತಿಗೆ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.