ಕಡಬ: ತಾಲೂಕಿನ ವಿವಿಧ ಭಾಗಗಳಲ್ಲಿ ಉಪಳಟ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ನೆರವಿನೊಂದಿಗೆ ನಡೆಸುತ್ತಿರುವ ಕಾರ್ಯಾಚರಣೆ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ.
ಕಾಡಾನೆಯು ಮಂಗಳವಾರ ರಾತ್ರಿ ಐತ್ತೂರು ಭಾಗದ ಸುಳ್ಯ ಸಮೀಪದಲ್ಲಿ ತೋಟಕ್ಕೆ ನುಗ್ಗಿ ಕೃಷಿ ನಾಶ ಮಾಡಿದೆ ಎಂಬ ಮಾಹಿತಿಯಂತೆ ಅತ್ತ ತೆರಳಿದ ತಂಡಕ್ಕೆ ಐತ್ತೂರಿನ ಅಜಾನದ ರಬ್ಬರ್ ತೋಟದಲ್ಲಿ ಆನೆ ಕಂಡುಬಂದಿತ್ತು.
ರೆಂಜಿಲಾಡಿಯಲ್ಲಿದ್ದ ಸಾಕಾನೆ ಶಿಬಿರದ ಐದು ಆನೆಗಳನ್ನು ಬುಧವಾರ ಬೆಳಗ್ಗೆ ಐತ್ತೂರಿಗೆ ಕೊಂಡೊಯ್ಯಲಾಯಿತು. ಸಂಜೆ ವೇಳೆಗೆ ಕಾರ್ಯಾಚರಣೆಯ ವೈದ್ಯರ ತಂಡವು ಸಮೀಪಕ್ಕೆ ತೆರಳಿ ಎರಡು ಬಾರಿ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದನ್ನು ನೀಡಲು ಯತ್ನಿಸಿದ್ದರೂ ಗುರಿ ತಪ್ಪಿತು. ಅರಣ್ಯ ಮತ್ತು ಕಡಿದಾದ ಪ್ರದೇಶ ಅದಾಗಿರುವ ಕಾರಣ ಕಾಡಾನೆಯ ಸೆರೆ ಸಾಧ್ಯವಾಗಿಲ್ಲ. ಅದಲ್ಲದೆ ಕಾರ್ಯಾಚರಣೆಯ ತಂಡ ಮತ್ತು ಸಾಕಾನೆಗಳು ಆಗಮಿಸುತ್ತಿದ್ದಂತೆ ಒಂಟಿ ಸಲಗವು ತೀವ್ರ ಪ್ರತಿರೋಧ ಒಡ್ಡಿ ತಪ್ಪಿಸಿಕೊಂಡಿತು ಎನ್ನಲಾಗಿದೆ.
ಅದು ಕಾರ್ಯಾಚರಣೆ ತಂಡವನ್ನೇ ಹಿಮ್ಮೆಟ್ಟಿಸಲು ಯತ್ನಿಸಿದ ಘಟನೆಯೂ ನಡೆದಿದೆ. ಬಳಿಕ ಅಂದಿನ ಕಾರ್ಯಾಚರಣೆಯನ್ನು ಸ್ಥಗಿತ ಮಾಡಿ ಸಾಕಾನೆಗಳನ್ನು ಪೇರಡ್ಕದ ಆನೆ ಶಿಬಿರಕ್ಕೆ ತರಲಾಯಿತು. ಕಾರ್ಯಾಚರಣೆ ವೇಳೆ 2 ಕಾಡಾನೆಗಳ ಇರುವಿಕೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ಮತ್ತೆ ಮುಂದುವರೆದಿದೆ.
ಡಿಸಿಎಫ್ ಡಾ. ದಿನೇಶ್ ಕುಮಾರ್ ಹಾಗೂ ತಂಡದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ ಆಗಮಿಸಿದ 5 ಸಾಕಾನೆಗಳು ಸಹಕಾರ ಪಡೆಯಲಾಗಿದೆ. ನಾಗರಹೊಳೆ ಮತ್ತು ಮಂಗಳೂರಿನಿಂದ ತಜ್ಞ ವೈದ್ಯರ ತಂಡವೂ ಜೊತೆಗಿದೆ.
ಕಾರ್ಯಾಚರಣೆ ವೀಕ್ಷಿಸಲು ಅಪಾರ ಸಂಖ್ಯೆಯ ಕುತೂಹಲಿಗರು ಆಗಮಿಸುತ್ತಿರುವುದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಕಾಡಾನೆ ಇರುವ ಜಾಗ ಪತ್ತೆ ಹಚ್ಚಿ ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಅಲ್ಲಿ ಜನರು ಸೇರುವುದರಿಂದ ಕಾಡಾನೆ ತನ್ನ ಪಥ ಬದಲಿಸುತ್ತಿದೆ ಎನ್ನಲಾಗಿದೆ.